ಬೀದರ್, ಜನವರಿ 30 : ಬಾಲ್ಕಿ ತಾಲೂಕಿನ ಅಕ್ಕಮಹಾದೇವಿ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಪೂಜಾ ಕೊಲೆ ಖಂಡಿಸಿ ಮಂಗಳವಾರ ಕರೆ ನೀಡಿದ್ದ ಬೀದರ್, ಬಸವ ಕಲ್ಯಾಣ ಹಾಗೂ ಬಾಲ್ಕಿಯಲ್ಲಿ ಬಂದ್ ಸಂದರ್ಭದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಘಟನೆಯನ್ನು ಖಂಡಿಸಿ ಪ್ರತಿಭಟನಾಕಾರರು ಓಲ್ಡ್ ಸಿಟಿಯೊಳಗೆ ಮೆರವಣಿಗೆ ಮಾಡಲು ಅನುಮತಿ ಕೊಡುವಂತೆ ಪಟ್ಟು ಹಿಡಿದಿದ್ದರು ಆದರೆ ಪೊಲೀಸರು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. <br /> <br />ವಿವಿಧ ಹಿಂದೂಪರ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು, ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಬಂದ್ ನಡೆಯಲಿದೆ. ಆಟೋ ಚಾಲಕರು, ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ಸವಿತಾ ಸಮಾಜ, ಜ್ಯೂವೆಲರಿ ಯೂನಿಯನ್ನವರು ಬಂದ್ಗೆ ಸ್ವಯಂ ಪ್ರೇರಿತ ಬೆಂಬಲ ನೀಡಿದ್ದಾರೆ.